ಯಶವಂತ ಚಿತ್ತಾಲ
1928- ಕನ್ನಡದ ಪ್ರತಿಭಾನ್ವಿತ ಸೃಜನಶೀಲ ಗದ್ಯಲೇಖಕ ನವೋದಯ ಮತ್ತು ನವ್ಯಕತೆಗಳ ಸಂಧ್ಯಾಕಾಲದಲ್ಲಿ ಹೊಸ ಹಾದಿಯ ನಿರ್ಮಿತಿಯೊಂದಿಗೆ ಕಥಾಸೃಷ್ಟಿಗೆ ತೊಡಗಿದ ಇವರು ಹುಟ್ಟಿ (3 ಆಗಸ್ಟ್ 1928) ಬೆಳೆದದ್ದು ಉತ್ತರಕನ್ನಡ ಜಿಲ್ಲೆಯ ಹನೇಹಳ್ಳಿಯಲಿ.್ಲ ತಂದೆ ವಿಠೋಬ, ತಾಯಿ ರುಕ್ಮಿಣಿ, ಅಣ್ಣ ಗಂಗಾಧರ ಚಿತ್ತಾಲ (ಕನ್ನಡದ ಪ್ರಸಿದ್ಧ ಕವಿ) ಆರಂಭಿಕ ವಿದ್ಯಾಭ್ಯಾಸ ಹನೇಹಳ್ಳಿ ಮತ್ತು ಕುಮಟಾಗಳಲ್ಲಿ, ಉನ್ನತ ವಿದ್ಯಾಭ್ಯಾಸ ಧಾರವಾಡ ಮುಂಬಯಿ ಮತ್ತು ಅಮೆರಿಕದ ನ್ಯೂ ಜೆರ್ಸಿಗಳಲ್ಲಿ 1953ರಿಂದ ಮುಂಬಯಿಯ ಬೇಕ್ ಲೈಟ್ ಹೈಲ್ಯುಮ್ ಲಿಮಿಟೆಡ್ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ; ಕಾರ್ಯನಿರ್ವಾಹಕ ನಿರ್ದೇಶಕದ ಹುದ್ದೆಯಿಂದ 1985ರಲ್ಲಿ ನಿವೃತ್ತ್ತಿ. ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಪ್ಲಾಸ್ಟಿಕ್ ಅಂಡ್ ರಬ್ಬರ್ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಇವರು ಮುಂಬಯಿಯ ಇಂಡಿಯನ್ ಪ್ಲಾಸ್ಟಿಕ್ ಮತ್ತು ಅಮೆರಿಕದ ರಿಸರ್ಚ್ ಅಂಡ್ ಡೆವಲಪ್‍ಮೆಂಟ್ ಸಂಸ್ಥೆಯಲ್ಲಿ ಹಲವಾರು ಸಂಶೋಧನೆಗಳನ್ನು ನಡೆಸಿದ್ದಾರೆ. 1972ರಲ್ಲಿ ಅಮೆರಿಕದ ಸ್ಟೀವನ್ಸ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ನಡೆಸಿ ರಾಸಾಯನಿಕ ತಂತ್ರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1965ರಲ್ಲಿ ಬೇಕೆಲ್ಯಾಟ್ ಹೈಲಮ್ ಲಿಮಿಟೆಡ್ ಕಂಪನಿಯಿಂದ ನಿವೃತ್ತಿ.

ವೃತ್ತಿಯಿಂದ ರಸಾಯನವಿಜ್ಞಾನದ ತಂತ್ರಜ್ಞರಾದರೂ ಇವರ ಅಸಕ್ತಿ ಕನ್ನಡ ಸಾಹಿತ್ಯ ಸೃಷ್ಟಿ. ಇವರಿಗಿರುವ ವಿಜ್ಞಾನದ ಅಭ್ಯಾಸದ ಹಿನ್ನೆಲೆ, ವೃತ್ತಿ ಸಂಬಂಧವಾದ ಪಾಶ್ಚಾತ್ಯ, ಪೌರಸ್ತ್ಯದೇಶಗಳ ಸಂಚಾರ; ಅಲ್ಲಿಯ ಸಾಹಿತ್ಯ, ಸಂಸ್ಕøತಿ ಬದುಕು, ಮೌಲ್ಯಗಳ ಪರಿಚಯ ಮತ್ತು ತೌಲನಿಕ ಚಿಂತನೆ ಇವರ ಸಾಹಿತ್ಯ ನಿರ್ಮಿತಿಗೆ ಹರಹನ್ನು ಆಳವನ್ನೂ ತಂದುಕೊಟ್ಟಿದೆ. ಮನಶ್ಯಾಸ್ತ್ರ, ಜೀವವಿಜ್ಞಾನ, ರಾಜಕೀಯ, ಅರ್ಥಶಾಸ್ತ್ರ, ಮಾನವಶಾಸ್ತ್ರ ಇತ್ಯಾದಿ ಅನೇಕ ಅಧ್ಯಯನ ಕ್ಷೇತ್ರಗಳಿಗೆ ಮನಸ್ಸನ್ನು ತೆರೆದು ಕೊಂಡಿರುವ ಇವರು ಫ್ರಾಯ್ಡ್, ಯೂಂಗ್, ಮಾಕ್ರ್ಸ್, ಎರಿಕ್ ಫ್ರಾಮ್, ಕಿರ್ಕೆಗಾರ್ಡ್ ಮುಂತಾದ ಚಿಂತಕರ ವಿಚಾರಗಳನ್ನು ಆಸಕ್ತಿಯಿಂದ ಅಧ್ಯಯನ ಮಾಡಿದ್ದಾರೆ. ಈ ಎಲ್ಲ ಹಿನ್ನೆಲೆಯಿಂದಾಗಿ ಇವರ ಕಲಾತ್ಮಕ ಸೃಜನ ಶೀಲತೆ, ಪುಷ್ಟಿಗೊಂಡು ಕೃತಿಗಳಲ್ಲಿ ಮೈದಳೆದಿದೆ.

ಇವರ ಮೊದಲ ಕತೆ ಪ್ರಕಟವಾಗಿದ್ದು 1949ರಲ್ಲಿ. ಅಲ್ಲಿಂದೀಚೆಗೆ ಇವರ ಏಳು ಕಥಾ ಸಂಕಲನಗಳು, ಐದು ಕಾದಂಬರಿಗಳು, ಎರಡು ಪ್ರಬಂಧ ಸಂಕಲನಗಳು ಪ್ಲ್ಯಾಸ್ಟಿಕ್ ತಂತ್ರ ವಿಜ್ಞಾನಕ್ಕೆ ಸಂಬಂಧಿಸಿದಂತೆ ಅನೇಕ ಇಂಗ್ಲಿಷ್ ಲೇಖನಗಳು ಪ್ರಕಟವಾಗಿವೆ. ಸಂದರ್ಶನ (1957). ಅಬೋಲೀನ (1960), ಆಟ (1969), ಕತೆಯಾದಳು ಹುಡುಗಿ (1980), ಬೇನ್ಯಾ (1982), ಸಿದ್ಧಾರ್ಥ(1988) 'ಓಡಿ ಹೋದಾ ಮುಟ್ಟಿ ಬಂದಾ (2001) - ಇವು ಇವರ ಕಥಾ ಸಂಕಲನಗಳು. (ಆಗಾಗ ಆಯ್ದ ಕಥೆಗಳ ಸಂಗ್ರಹಗಳೂ ಪ್ರಕಟವಾಗಿತ್ತು.) ಮೂರು ದಾರಿಗಳು (1964), ಶಿಕಾರಿ (1970), ಛೇದ (1985) ಪುರುಷೋತ್ತಮ, ಕೇಂದ್ರವೃತ್ತಾಂತ - ಇವು ಇವರ ಕಾದಂಬರಿಗಳು.

	ಇವರ ಮೊದಲ ಕಥಾ ಸಂಕಲನ `ಸಂದರ್ಶನ ದಿಂದ ಇತ್ತೀಚಿನ 'ಸಿದ್ಧಾರ್ಥದ ವರೆಗೆ ಚಿತ್ತಾಲರು ಹಂತ ಹಂತವಾಗಿ ಬೆಳೆಯುತ್ತ ಬಂದಿರುವುದನ್ನು ಗುರುತಿಸಬಹುದು. ಇವರ ಸಮಗ್ರ ಕಥಾಸಾಹಿತ್ಯವನ್ನು ಹನೇಹಳ್ಳಿಯ ಪ್ರಾದೇಶಿಕ ಹಿನ್ನೆಲೆಯುಳ್ಳ ಸಾಂಪ್ರದಾಯಿಕ ಪ್ರಜ್ಞೆಯ ಆವಿಷ್ಕಾರಗಳಾದ ಕತೆಗಳು, ನಗರ ಜೀವನದ ಹಿನ್ನೆಲೆಯಲ್ಲಿ ಬರೆದ ನವ್ಯ ಪ್ರಜ್ಞೆಯ ಅಭಿವ್ಯಕ್ತಿಯನ್ನು ಸಾಧಿಸಲೆತ್ನಿಸುವ ಕತೆಗಳು ಮತ್ತು ವಿಶಿಷ್ಟ ಸಾಕಾರ ಅನುಭವದ ಮೇಲೆ ನಿಂತಿದ್ದು ಸಾರ್ವತ್ರಿಕತೆಯತ್ತ ಮುಖ ತಿರುಗಿಸಿದ ಕತೆಗಳು ಎಂದು ಮೂರು ತೆರನಾಗಿ ವಿಂಗಡಿಸಬಹುದು.

	ಇವರ ಕಾದಂಬರಿಗಳು ಕೂಡ ಕತೆಗಳಷ್ಟೇ ಪ್ರಾಮುಖ್ಯತೆ ಪಡೆದಿದೆ. ಮೂರು ದಾರಿಗಳು ಚಲನಚಿತ್ರವಾಗಿ ಪ್ರಶಸ್ತಿ ಪಡೆದಿದ್ದರೆ, ಶಿಕಾರಿ 1979ರ ಶ್ರೇಷ್ಠ ಸೃಜನಶೀಲ ಸಾಹಿತ್ಯ ಕೃತಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿಶೇಷ ಪುರಸ್ಕಾರ ಗಳಿಸಿದೆ. `ಪುರುಷೋತ್ತಮ ಕಾದಂಬರಿಗೆ ಭಾರತೀಯ ಭಾಷಾ ಪ್ರಶಸ್ತಿಯೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಲಭ್ಯವಾಗಿವೆ. ಇವರ ಮೊದಲ ಕಾದಂಬರಿ ಮೂರು ದಾರಿಗಳು ಸಾಂಪ್ರದಾಯಿಕ ಸಮಾಜದ ವಾತಾವರಣವನ್ನು ಪಡೆದುಕೊಂಡ ಕತೆ. ಹನೇಹಳ್ಳಿಯ ಶಾನಭಾಗ ವಿಶ್ವನಾಥರ ಏಕಮಾತ್ರ ಪುತ್ರಿ ನಿರ್ಮಲೆ ಕಾರವಾರದ ಸೋದರತ್ತೆಯ ಮನೆಯಲ್ಲಿ ಉಳಿದುಕೊಂಡು ಇಂಗ್ಲಿಷ್ ಕಲಿಯುತ್ತಾಳೆ. ಅದೇ ಊರಿನ ಲಫಂಗ ಯುವಕ ರಂಗಪ್ಪನ ಸ್ಟುಡಿಯೋದಲ್ಲಿ ಒಂದು ಸಾಯಂಕಾಲ ನಿರ್ಮಲೆ ಇದ್ದಳೆಂಬ ಸುದ್ದಿಯಿಂದ ಕತೆ ಪ್ರಾರಂಭವಾಗುತ್ತದೆ. ಅವಸರದಿಂದ ತನ್ನ ಮದುವೆಯ ಏರ್ಪಾಟನ್ನು ತಂದೆ ಮಾಡಿದ್ದಾರೆಂಬುದರಿಂದ ಕನಲಿದ ನಿರ್ಮಲೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

	ಶಿಕಾರಿ ಕನ್ನಡದ ಅತ್ಯುತ್ತಮ ಕಾದಂಬರಿಗಳಲ್ಲೊಂದು. ಇಬ್ಬರು ಮೇಲಧಿಕಾರಿಗಳ ಪರಸ್ಪರ ಪ್ರತಿಷ್ಠೆಯ ಕಾದಾಟದಲ್ಲಿ ತಾನು ನೇರವಾಗಿ ಪಾಲ್ಗೊಂಡಿರುವ ವಿದ್ಯಮಾನಗಳಿಗೆ ಬಲಿಪಶುವಾದ ನಾಗಪ್ಪನ ಮಾನಸಿಕ ತುಮುಲವನ್ನು ಈ ಕಾದಂಬರಿ ಚಿತ್ರಿಸುತ್ತದೆ. ಕಾದಂಬರಿಯ ಕೇಂದ್ರ ಕ್ರಿಯೆಯೊಂದಿಗೆ ನೇರ ಸಂಪರ್ಕ ಪಡೆದಿರುವ ನಾಗಪ್ಪನನ್ನು, ಕಾದಂಬರಿಯ ಕೇಂದ್ರಕ್ಕೆ ಬಂಧಿತರಲ್ಲದ, ಮಿಂಚಿ ಮಾಯವಾಗುವ ಇತರ ಪಾತ್ರಗಳು ಬೇಟೆಯಾಡುವ ವ್ಯಕ್ತಿ ವ್ಯವಸ್ಥೆಗಳ ಹೋರಾಟವನ್ನು ಸಾಮಾನ್ಯ ಕಥಾ ಚೌಕಟ್ಟಿನಲ್ಲಿ ಹಿಡಿದ ಚಿತ್ತಾಲರ ಪ್ರತಿಭೆ ಅನನ್ಯವಾದುದು.

	ಛೇದ ಮುಂಬಯಿಯ ಜನನಿಬಿಡ ಕೊಂಪೆಗಳ ವಿದ್ಯಮಾನಗಳ ಕಡೆಗೆ ಬೆಳಕು ಹಾಯಿಸುವ ಕೊಲೆಯೊಂದರ ಸುತ್ತ ಹೆಣೆಯಲ್ಪಟ್ಟು ಮನುಷ್ಯರ ದುರಂತವನ್ನು ಅವನ ದೈನಂದಿನ ಸ್ಥಿತಿಯಲ್ಲಿ ಹಿಡಿಯಬಲ್ಲ ಮಹತ್ತ್ವಾಕಾಂಕ್ಷೆಯುಳ್ಳ ಕಾದಂಬರಿ, ಗುಜರಾತಿ ವ್ಯಾವಹಾರಿಕನ ನಿಗೂಢಕೊಲೆ, ಅದರ ವರದಿಗಾಗಿ ಕೇರಳೀಯ ತರುಣನ ತಡಕಾಟ, ಅವನಿಗಾಗಿ ಅವನ ಅಣ್ಣನ ಹುಡುಕಾಟ, ಕೊಲೆಯಾದವನ ಅಣ್ಣ ಕಾದಂಬರಿಯ ಕೇಂದ್ರ ವ್ಯಕ್ತಿಯಾದ ಪಾರಸಿ ಮುದುಕನೊಂದಿಗೆ ತೋಡಿಕೊಂಡ ವೃತ್ತಾಂತ ಮುಂತಾದವುಗಳಿಂದ ಈ ಕಾದಂಬರಿ ಕೊಲೆಯಾದ ವ್ಯಕ್ತಿಗಿಂತ ಹೆಚ್ಚಾಗಿ ಅದನ್ನು ನಿಮಿತ್ತವಾಗಿಟ್ಟುಕೊಂಡು ಅದರಿಂದ ಬಾಧಿತರಾದ ವ್ಯಕ್ತಿಗಳತ್ತ ಹೆಚ್ಚು ಆಸಕ್ತಿ ಹುಟ್ಟಿಸುತ್ತದೆ.

	`ಪುರುಷೋತ್ತಮ ಒಂದು ಪತ್ತೇದಾರಿ ಕಾದಂಬರಿಯಂತೆ ಭಾಸವಾದರೂ ಪ್ರೀತಿಯ ಸತ್ಯ ಶಕ್ತಿಗಳ ಶೋಧನೆಯಾಗುತ್ತದೆ. ಯಾತನ ವಿಕೃತ ರೀತಿಗಳು, ಯಾತನೆಗಳನ್ನು ಗುರುತಿಸುತ್ತಲೇ ಒಂದು ಗುಣಾತ್ಮಕ (ಪಾಸಿಟ್) ಸ್ಪಂದನವನ್ನೂ ರೂಪಿಸುತ್ತದೆ, ಮನುಷ್ಯನ ಉದಾತ್ತತೆ, ಒಳ್ಳೆ ಯಾತನೆಗಳನ್ನು ಅನುಭವಕ್ಕೆ ತಂದುಕೊಡುತ್ತದೆ.

	ಚಿತ್ತಾಲರ ಸಾಹಿತ್ಯ ದೃಷ್ಟಿ, ಸೃಜನಪ್ರಕ್ರಿಯೆ, ಸಾಮಾಜಿಕ ಧೊರಣೆ, ವಿಮರ್ಶೆಯ ನಿಲವು, ನಂಬಿಕೆಗಳು ಇವುಗಳನ್ನು ಕುರಿತಂತೆ ಬರೆದಿರುವ ಪ್ರಬಂಧಗಳ ಸಂಕಲನವೇ ಸಾಹಿತ್ಯ, ಸೃಜನಶೀಲತೆ ಮತ್ತು ನಾನು. ಈ ಸಂಕಲನದ ಮೊದಲ ಭಾಗದ ಪ್ರಬಂಧಗಳು ಚಿತ್ತಾಲರ ವೈಯಕ್ತಿಕ ಸೃಷ್ಟಿಕಾರ್ಯ ಕುರಿತು ಓದುಗನಿಗೆ ಮಾರ್ಗದರ್ಶನ ಮಾಡಬಲ್ಲಂಥವಾದರೆ, ಎರಡನೆಯ ಭಾಗ ವಿಶೇಷವಾಗಿ ಲೇಖಕನ ಹಾಗೂ ಸಮಾಜದ ನಡುವಣ ಸಂಬಂಧವನ್ನು ಕುರಿತಂಥವುಗಳಾಗಿವೆ.
		
(ಆರ್.ಎಸ್.ಜೆ.)

ಚಿತ್ತಾಲರು ಮತ್ತೆ ಮತ್ತೆ ಹೇಳರಿರುವಂತೆ, ಹನೇನಹಳ್ಳಿಗೆ ಅವರ ಸಾಹಿತ್ಯದಲ್ಲಿ ಮಹತ್ವದ ಸ್ಥಾನವಿದೆ. ಅದು ತಮ್ಮ ಸಾಹಿತ್ಯದ ಹುಟ್ಟಿಗೆ ಕಾರಣವಾಗಿ, ಅದರ ಚೈತನ್ಯಕ್ಕೆ ನಿರಂತರವಾದ ಜೀವಸೆಲೆಯಾಗಿ ನಿಂತ ಮೂಲಭೂತವಾದ ಪ್ರೇರಕ ಶಕ್ತಿ ಎಂದಿದ್ದಾರೆ. ಆಧುನಿಕ ನಾಗರಿಕತೆಯ ಯಾಂತ್ರಿಕತೆ, ಮನುಷ್ಯ-ಮನುಷ್ಯನ ಸಂಬಂಧಗಳು ತಿರುಚಿಹೋಗುವುದು. ಕ್ರೂರ ಸ್ಪರ್ಧೆ ಮನುಷ್ಯನ ಸ್ವಭಾವವನ್ನೆ ವಿಕಾರಗೊಳಿಸುವುದು. ಅವರ ಸಾಹಿತ್ಯದಲ್ಲಿ ದಾಖಲಾಗುತ್ತದೆ. ಪ್ರೀತಿ, ಸ್ನೇಹ, ಕರುಣೆ-ಇವುಗಳನ್ನು ಬದುಕಿನ ಮುಖ್ಯ ಮೌಲ್ಯಗಳಾಗಿ ಕಾಣುವ ಅವರ ಸಾಹಿತ್ಯ, ಇವುಗಳ ಅಭಾವದಿಂದ ಆಗುವ ನೋವಿಗೆ ಕನ್ನಡಿ ಹಿಡಿಯುತ್ತದೆ. ಬದುಕಿನ ಯಾತನೆ ಮತ್ತು ನಿಗೂಢತೆಗಳ ಕಥೆಗಾರ-ಕಾದಂಬರಿಕಾರ ಚಿತ್ತಾಲ, ಅವರ ಕಥೆಯಲ್ಲಾಗಲಿ ಕಾದಂಬರಿಯಲ್ಲಾಗಲಿ ದಟ್ಟವಾದ ಕ್ರಿಯೆ ಇರುತ್ತದೆ, ಕ್ರಿಯೆ ಒಂದು ಉದ್ವೇಗದ, ಒತ್ತಡದ ವಾತಾವರಣದಲ್ಲಿ ಸಾಗುತ್ತದೆ, ಒಂದು ತುರ್ತಿನ ಒತ್ತಡ ಅನುಭವವಾಗುತ್ತದೆ. ಕ್ರಿಯೆಯ ಭೌತಿಕ ಆವರಣ ಯಾವಾಗಲೂ ಮೂರ್ತ, ಪಾತ್ರಗಳೂ ಹಾಗೆಯೇ. ಆದರೆ ಪಾತ್ರಗಳು ಮುಖಾಮುಖಿಯಾಗಿ ಕ್ರಿಯೆ ಮುಂದೆ ಸಾಗಿತೆಂದರೆ, ಸೃಷ್ಟಿಯಾಗುವ ಒಳ ಜಗತ್ತು, ಜಗತ್ತಿನ ಕ್ರಿಯೆ ನಿಗೂಢ, ಈ ನಿಗೂಢತೆಯನ್ನು ಇನ್ನೂ ಗಾಢಗೊಳಿಸುತ್ತದೆ. ಬದುಕಿನ ಒಡನೆಯೇ ಹೆಜ್ಜೆ ಇಡುವ ಸಾವು, ಇದು ಒಟ್ಟಿನಲ್ಲಿ ನೋವಿನ, ಯಾತನೆಯ, ಒಂಟಿತನದ ಜಗತ್ತು. ಈ ಜಗತ್ತಿನಲ್ಲಿ ಮನುಷ್ಯನ ಭಾಷೆಯ ಬಡತನ, ಮಿತಿಗಳೇ ಸ್ಪಷ್ಟವಾಗುತ್ತವೆ. ಬದುಕಿನ ದಿಗ್ಭ್ರಮೆ ನೋವುಗಳಿಗೆ ಮತ್ತೊಂದು ಮೂಲವಿದೆ-ಮನುಷ್ಯನ ನ್ಯಾಯಪ್ರಜ್ಞೆ, ನೀತಿಪ್ರಿಯತೆ, ಆದರೆ ವಿಶ್ವವು ನ್ಯಾಯ, ನೀತಿಗಳ ಪರವೂ ಅಲ್ಲ. ವಿರುದ್ಧವೂ ಅಲ್ಲ. ಅದು `ಅಮಾರಲ್ ನೈತಿಕವಾಗಿ ತಟಸ್ಥ, ಇದು ಮನುಷ್ಯನ `ಟ್ರ್ಯಾಜಿಡಿ', ಆದರೆ ಈ ನ್ಯಾಯ, ನೀತಿ ಪ್ರಿಯತೆಯೇ ಅವನ ಬಾಳಿಗೆ ಅರ್ಥವನ್ನು ಕೊಡುವುದು. ಚೆಲುವನ್ನು ಕೊಡುವುದು.
2001ರಲ್ಲಿ ಚಿತ್ತಾಲರು `ಸಾಹಿತ್ಯದ ಪತ್ರಧಾತುಗಳು ಎನ್ನುವ ಸಾಹಿತ್ಯ ಚಿಂತನೆಯ ಕೃತಿಯನ್ನು ಪ್ರಕಟಿಸಿದರು.

ಚಿತ್ತಾಲರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಮಹಾರಾಷ್ಟ್ರ ಸರ್ಕಾರದಿಂದ ಮಹಾರಾಷ್ಟ್ರ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಸಸ್ತಿ, ಡಾ. ಶಿವರಾಮ ಕಾರಂತ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ.

(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ